ಧೂಪಕ	
ಸ್ವತಃ ಅನಿಲಸ್ಥಿತಿಯಲ್ಲಿ ಪಸರಿಸುತ್ತ ಕೊಠಡಿಯ ಇಲ್ಲವೇ ಉಗ್ರಾಣದ ಇಲ್ಲವೇ ಸೀಮಿತವಾದ ಒಂದು ವಿಶಾಲ ಪ್ರದೇಶದ ವಾತಾವರಣದಲ್ಲಿ ಹರಡಿಕೊಂಡು ಅಲ್ಲಿನ ಕೀಟ ನುಸಿ ಹಾತೆ ಮುಂತಾದ ಪಿಡುಗುಗಳನ್ನು ನಿವಾರಿಸುವ ರಾಸಾಯನಿಕ ಸಂಯುಕ್ತ (ಫ್ಯೂಮಿಗೆಂಟ್). ಇದರ ಕ್ರಿಯೆಗೆ ಧೂಪನ (ಫ್ಯೂಮಿಗೇಷನ್) ಎಂದು ಹೆಸರು. ಘನ ಇಲ್ಲವೇ ದ್ರವ ಅನಿಲ ಸ್ಥಿತಿಗಳಲ್ಲಿ ಧೂಪಕವನ್ನು ಪ್ರಯೋಗಿಸಬಹುದು. ಆದರೆ ಅಧಿಕ ಪರಿಣಾಮಕಾರಿ ಆಗಬೇಕಾದರೆ ಅದು ಸುಲಭ ಬಾಷ್ಟಶೀಲ (ವೋಲಟೈಟ್) ಆಗಿರಬೇಕು. ಆಗ ಮಾತ್ರ ಧೂಪಕ ಉದ್ದಿಷ್ಟ ಜೀವಿಗಳನ್ನು ತಾಗಿ ಅವನ್ನು ನಾಶಗೊಳಿಸಬಲ್ಲುದು. ಪರಿಸೀಮಿತವಾಗಿರುವ ಇಲ್ಲವೇ ಅಪ್ರವೇಶ್ಯವಾಗಿರುವ ನೆಲೆಗಳಲ್ಲಿ ಪಿಡುಗು ನಿಯಂತ್ರಣ ಮಾಡುವ ಕಾರ್ಯದಲ್ಲಿ ಧೂಪಕಗಳು ವಿಶೇಷ ಉಪಯುಕ್ತವಾಗಬಲ್ಲವು. ಉದಾಹರಣೆಗೆ ಹಿಟ್ಟು ಮತ್ತು ಮೇವು ಗಿರಣಿಗಳು, ಧಾನ್ಯ ದಾಸ್ತಾನು ಮಳಿಗೆಗಳು, ವಿಶೇಷ ಸಸ್ಯಗಳನ್ನು ಬೆಳೆಸುವ ಗಾಜಿನ ಮನೆಗಳು, ಉಗ್ರಾಣಗಳು ಮುಂತಾದ ಎಡೆಗಳಲ್ಲಿ ಕೀಟ ಹಾಗೂ ದಂಶಕ ನಿಯಂತ್ರಣಕ್ಕಾಗಿ ಅವನ್ನು ತಪ್ಪದೇ ಬಳಸುವುದುಂಟು. ವಾಸದ ಮನೆ, ವಿಶೇಷವಾಗಿ ಮಲಗುಮನೆ ಮತ್ತು ಪಾಯಿಖಾನೆಗಳನ್ನು ಆಗಾಗ ಧೂಪಿಸುವುದು ವಾಡಿಕೆ.

ಅಹಿತಕಾರಿ ಜೀವಾಣುಗಳ ನಿಯಂತ್ರಣಕ್ಕಾಗಿ ಧೂಪನದ ಆಧುನಿಕ ಬೆಳೆವಣಿಗೆ 1854ರಲ್ಲಿ ಪ್ರಾರಂಭವಾಯಿತು. ಆಗ ಕೀಟನಿಯಂತ್ರಣವನ್ನು ಕಾರ್ಬನ್ ಡೈಸಲ್ಫೈಡ್ ಉಪಯೋಗದಿಂದ ಸಾಧಿಸಿದರು. ಸಾಮಾನ್ಯವಾಗಿ ವಿಷಾನಿಲಗಳಿಂದ ಧೂಪನವನ್ನು ನೆರವೇರಿಸಲಾಗುವುದು. ಅನಿಲಗಳಿಗೆ ಅನಿರ್ದಿಷ್ಟವಾಗಿ ಹಿಗ್ಗುವ ಅಥವಾ ಅವಕಾಶವಿದ್ದಷ್ಟೂ ವ್ಯಾಕೋಚಿಸುವ ಸಾಮಥ್ರ್ಯ ಉಂಟು. ವ್ಯಾಕೋಚನದ ಪರಿಣಾಮವಾಗಿ ತೀರ ಚಿಕ್ಕಕಣ ಗಾತ್ರ (0.001 ( ಗಿಂತ ಕಡಿಮೆ ಗಾತ್ರ) ಅನಿಲಗಳು ಜೀವಾಣುಗಳ ಶ್ವಾಸನಾಳದ ಮೂಲಕ ವಿಳಂಬವಿಲ್ಲದೆ ಅಂಗಾಂಶಗಳನ್ನು ಸೇರಲು ಅನುಕೂಲ ಮಾಡಿಕೊಡುತ್ತದೆ. ಇದೇ ಗುಣಗಳೇ ಕೆಲವು ಧೂಪನಗಳು ತೆರೆದ ಚರ್ಮದ ಮೇಲ್ಮೈಯನ್ನು ಹೊಕ್ಕು ಗಣನೀಯ ದುಷ್ಪರಿಣಾಮ ಉಂಟುಮಾಡಲು ಕಾರಣವಾಗುತ್ತದೆ. ಕೀಟ ಮತ್ತು ದಂಶಕಗಳ ನಾಶಕ್ಕಾಗಿ ಧೂಪನವನ್ನು ಅನೇಕ ವಿಧಗಳಲ್ಲಿ ರಾಸಾಯನಿಕಗಳಿಂದ ನಿರ್ವಹಿಸಲಾಗುವುದು. ಗೆದ್ದಲನ್ನು ಮೀಥೈಲ್ ಬ್ರೋಮೈಡಿನಿಂದ ನಿಯಂತ್ರಿಸಲಾಗುವುದು. ಗಿರಣಿ, ಉಗ್ರಾಣ ಮತ್ತು ಕಾರ್ಖಾನೆಗಳಲ್ಲಿ ಹೈಡ್ರೋಜನ್ ಸಯನೈಡ್ ಅನಿಲವನ್ನು ಉಪಯೋಗಿಸಿ ಕ್ರಿಮಿಗಳನ್ನು ನಿವಾರಿಸಲಾಗುವುದು. ನಾಶಕಾರಿ ಕೀಟಗಳಿಂದ ತುಂಬಿದ ಸಾಗುವಳಿ ಭೂಮಿಗೆ ಗಾಳಿಗಿಂತ ಭಾರವಾದ ಧೂಪನಗಳನ್ನು ಉಪಯೋಗಿಸುವುದು ಸಾಮಾನ್ಯ ಆಭ್ಯಾಸ. ಅಹಿತಕಾರಿ ದಂಶಕಗಳು ಮತ್ತು ಈತಿ ಜಂತುಗಳನ್ನು ಬಿಲದೊಳಕ್ಕೆ ಕ್ಯಾಲ್ಸಿಯಮ್ ಸಯನೈಡ್ ಪುಡಿ ರೇಚಿಸಿ ನಾಶಗೊಳಿಸುವರು. ಕ್ಯಾಲ್ಸಿಯಮ್ ಸಯನೈಡ್ ವಾತಾವರಣ ತೇವದೊಡನೆ ಸೇರಿ ಹೈಡ್ರೋಜನ್ ಸಯನೈಡನ್ನು ಬಿಡುಗಡೆ ಮಾಡುತ್ತದೆ.									(ಎಲ್.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ